ಫಿಲಿಪ್ಸ್, ಸ್ಟೀವನ್ಸ್
1864-1915 ಇಂಗ್ಲೀಷ್ ಕವಿ ಮತ್ತು ನಾಟಕಕಾರ. ಹುಟ್ಟಿದ್ದು ಆಕ್ಸ್‍ಫರ್ಡ್ ಬಳಿಯ ಸಮ್ಮರ್‍ಟೌನ್‍ನಲ್ಲಿ. ತಂದೆ ಪೀಟರ್‍ಬರೊ ಕೆತೆಡ್ರಲ್‍ನಲಿ ಪಾದ್ರಿ. ತಾಯಿ ಅಗಾಥಾ ಸೋಫಿಯಾ. ಕವಿ ವಡ್ರ್ಸ್‍ವರ್ತ್ ಮತ್ತು ಲಾರೆನ್ಸ್ ಬಿನ್ಯನ್‍ರ ಸೋದರ ಸಂಬಂಧಿ. ಈತ ಸ್ಟ್ರ್ಯಾಟ್‍ಫೋರ್ಡ್‍ನ ಟ್ರಿನಿಟಿ ಕಾಲೇಜಿನ ಶಾಲೆ ಅನಂತರ ಪೀಟರ್‍ಬರೋವಿನ ಕಿಂಗ್ಸ್ ಶಾಲೆ ಮತ್ತು ಔಂಡ್ಸ್ ಶಾಲೆಗಳಲ್ಲಿ ಶಿಕ್ಷಣ ಪಡೆದ. ಬಾಲ್ಯದಿಂದಲೂ ಈತ ಸರಸಿಯಲ್ಲ; ಮಹಾ ಸಿಡುಕ ಮತ್ತು ಒರಟ. ಶಾಲೆಯಲ್ಲಿ ಸಹಪಾಠಿಗಳೊಂದಿಗೂ ಅಧ್ಯಾಪಕರೊಂದಿಗೂ ಜಗಳವಾಡಿ ವಿರಸಕಟ್ಟಿಕೊಂಡಿದ್ದ. ಸಿವಿಲ್ ಸರ್ವಿಸ್‍ಗೆ ಓದುವಾಗ ಅದರಲ್ಲಿ ಆಸಕ್ತಿ ಬಾರದೆ ನಾಟಕದ ಗೀಳು ಹಚ್ಚಿಕೊಂಡು 1885ರಿಂದ 1892ರ ವರೆಗೆ ತನ್ನ ದಾಯದಿ ಫ್ರಾಂಕ್ ಬೆನ್ಯನ್‍ನ ಕಂಪನಿಯಲ್ಲಿ ನಟನಾಗಿ ದುಡಿದ. ಈತನಿಗೆ ಒಳ್ಳೆಯ ಕಂಠ ಇತ್ತು. ಮಾತುಗಳನ್ನೂ ಚೆನ್ನಾಗಿ ಬಾಯಿಪಾಠ ಮಾಡುತ್ತಿದ್ದ. ಆದರೆ ಅಭಿನಯ ಮಾತ್ರ ಸೊನ್ನೆ. ಇದರಿಂದಾಗಿ ನಾಟಕದಿಂದ ಹೊರಗೆ ಹಾಕಿದರು. ಒಳ್ಳೆಯ ನಟನಾಗುವುದು ಸಾಧ್ಯವಾಗದಿದ್ದರೂ ನಟರಿಗೆ ಅಂಟಿಕೊಳ್ಳುವ ದುಶ್ಚಟಗಳನ್ನು ಮಾತ್ರ ಹಚ್ಚಿಕೊಂಡು ಶಕ್ತಿಯ ಅಪವ್ಯಯ ಮಾಡಿಕೊಂಡ. ಜೀವನೋಪಾಯಕ್ಕಾಗಿ ಆರು ವರ್ಷಕಾಲ ಇತಿಹಾಸದ ಪಾಠ ಹೇಳಿದ. 1898ರಲ್ಲಿ ಪ್ರಕಟವಾದ ಈತನ ಮೊದಲ ಕವನ ಸಂಕಲನ ಕೀರ್ತಿಯನ್ನು ತಂದಿತು. ಒಂದೇ ಸಾವಿರ ಗಿನಿ ನಗದು ಬಹುಮಾನ ಅಕಾಡೆಮಿಯಿಂದ ಸಂದಿತು. ಇದೇ ಸಮಯದಲ್ಲೆ ಸರ್‍ಜಾರ್ಜ್ ಅಲೆಕ್ಸಾಂಡರ್‍ನ ಭೇಟಿಯಾಯಿತು. ಪ್ಯಾವ್ಲೊ ಅಂಡ್ ಫ್ರಾನ್ಸಿಸ್ಕಾ ಎಂಬ ನಾಟಕವನ್ನು ಬರೆಯುವ ಮೊದಲೇ ಪ್ರಕಾಶಕರಿಗೆ ಮಾರಿ ಹಣ ಪಡೆದ. ಗೊತ್ತು ಮಾಡಿದ ಅವಧಿಯೊಳಗೆ ಬರೆದು ಮುಗಿಸಲಾರದೆ ವಿಳಂಬ ಮಾಡಿ ಮುಗಿಸಿದ. ಈ ಕಾವ್ಯನಾಟಕದಿಂದ ಈತನ ಕೀರ್ತಿ ಶಿಖರಕ್ಕೇರಿತು. ರಂಗದ ಮೇಲೆ ಇದು ಅತ್ಯಂತ ಯಶಸ್ವಿಯಾಯಿತು. ಪ್ರಥಮ ಪ್ರಯೋಗ (1902) ಸರ್ ಜಾರ್ಜ್ ಅಲ್‍ಕ್ಸಾಂಡರ್‍ನಿಂದ ಸೇಂಟ್ ಜೇಮ್ಸ್ ಥಿಯೇಟರ್‍ನಲ್ಲಿ ಆಯಿತು. ಅಂದಿನಿಂದ ಹತ್ತು ವರ್ಷಕಾಲ ಈ ನಾಟಕ ರಂಗದಮೇಲೆ ವಿಜೃಂಭಿಸಿತು. ವಿಮರ್ಶಕರು ಈತನನ್ನು ಸಾಫೋಕ್ಲಿಸ್‍ನಿಂದ ಹಿಡಿದು ಷೇಕ್ಸ್‍ಪಿಯರ್‍ನವರೆಗಿನ ಶ್ರೇಷ್ಠ ನಾಟಕಕಾರರ ಸಾಲಿನಲ್ಲಿ ನಿಲ್ಲಿಸಿದರು. ಆದರೆ ನೀರೊ ನಾಟಕ ಬರೆದು ಪತನಹೊಂದಿದ. 1906ರಿಂದ ಈಚೆಗೆ ವಿಮರ್ಶಕರ ಟೀಕೆಗೆ ಗುರಿಯಾದ. 1892ರಲ್ಲಿ ಮದುವೆಯಾಗಿದ್ದ ಮೇಲಿ ಡ್ಯಾರ್ಡ್‍ಳನ್ನು 1908ರಲ್ಲಿ ವಿವಾಹ ವಿಚ್ಛೇದನ ಮಾಡಿದ. ಅದೊಂದು ಕೆಟ್ಟಕಾಲ, ಹಣ, ನೈತಿಕ ಬಲ ಯಾವುದೂ ಇಲ್ಲದೆ ಹತಾಶನಾಗಿ ಕುಳಿತಾಗ ಲಾರೆನ್ಸ್ ಬಿನ್ಯನ್ ಸಹಾಯಕ್ಕೆ ಬಂದ. 1913ರಿಂದ ಜೀವನ ಪರ್ಯಂತ ಪೊಯಿಟ್ರಿ ರಿವ್ಯೂನ ಸಂಪಾದಕನಾಗಿ ದುಡಿದು ಹೆಸರು ಗಳಿಸಿದ. ಅನೇಕ ದುವ್ರ್ಯಸನಗಳಿಗೆ ಒಳಗಾದ ಈತನ ಆರೋಗ್ಯ ಕೆಟ್ಟಿತು. 1915ರಲ್ಲಿ ಕೇವಲ 51ನೆಯ ವಯಸ್ಸಿಗೆ ಡೀಲ್ ಎಂಬಲ್ಲಿ ಮರಣಹೊಂದಿದ. ಹೀಸ್ಟಿಂಗ್ಸ್‍ನಲ್ಲಿ ಈತನ ಸಮಾಧಿಯಾಯಿತು. 

	ಈತನದು ಎತ್ತರವಾದ ಲಕ್ಷಣವಾದ ದೇಹಸೌಷ್ಠವ. ಆಕರ್ಷಕ ವ್ಯಕ್ತಿತ್ವ. ಸ್ವಭಾವತಃ ಸೋಮಾರಿ, ಎಚ್ಚರಗೇಡಿ, ದುಂದುಗಾರ. ಸ್ವಹಿತಾಸಕ್ತನಾದರೂ ತನ್ನ ಬಗ್ಗೆ ಹೇಗೋ ಹಾಗೆ ಪರರ ಬಗ್ಗೆಯೂ ಧಾರಾಳಿ. ಸ್ನೇಹಶೀಲ. ಬಹಳ ಜನರಲ್ಲಿ ಸಲುಗೆ. ಒಳ್ಳೆಯ ಕ್ರಿಕೆಟ್ ಆಟಗಾರ.

	ಪ್ಯಾವ್ಲೊ ಅಂಡ್ ಫ್ರಾಸ್ಸಿಸ್ಕಾ ಎಂಬ ನಾಟಕ ಈತನ ಶ್ರೇಷ್ಠನಾಟಕ. ಈತನ ಇತರ ಕೃತಿಗಳು ಓರಿಸ್ಟಿಸ್ ಅಂಡ್ ಆದರ್ ಪೊಯಮ್ಸ್ (1884), ಪ್ರಿಮೆವೆರ್ (1890), ಎರೆಮಸ್ (1894), ಕ್ರೈಸ್ಟ್ ಇನ್ ಹೇಡ್ಸ್ (1897,) ಪೊಯಮ್ಸ್ (1898), ನ್ಯೂ ಪೊಯಮ್ಸ್ (1908), ಲಿರಿಕ್ಸ್ ಅಂಡ್ ಡ್ರಾಮಾಸ್ (1913), ಪನಾಮ ಅಂಡ್ ಅದರ್ ಪೊಯಮ್ಸ್ (1915), ವರ್ಸ್ ಪ್ಲೇಸ್; ಹೆರಾಡ್ (1901), ಯೂಲಿಸಿಸ್ (1902), ದಿ ಸಿನ್ ಆಫ್ ಡೇವಿಡ್ (1904), ನೀರೊ (1906), ಫೌಸ್ಟ್ (ಜೆ. ಸಿ. ಕಾರ್‍ನೊಂದಿಗೆ 1908), ದಿ ನ್ಯೂ ಇನ್‍ಫೆರ್ನೊ (1910), ಪಿಯೆಟ್ರೊ ಆಫ್ ಸಿಯೆನ್ನಾ (1910), ದಿ ಕಿಂಗ್ (1912), ಆರ್ಮಾಗೆಡಾನ್ (1915), ಕಲೆಕ್ಟಡ್ ಪ್ಲೇಸ್ (1921), ಹೆರಾಲ್ಡ್ (1927).				     (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ